ಕ್ರೀಸಸ್ 
	ಲಿಡಿಯ ದೇಶದ ಕೊನೆಯ ದೊರೆ. ಆಳ್ವಿಕೆಯ ಕಾಲ ಕ್ರಿ.ಪೂ. 560-546. ಏಷ್ಯ ಮೈನರಿನ ಬಹುಭಾಗ ಇವನ ಆಳ್ವಿಕೆಗೆ ಸೇರಿತ್ತು. ಈತ ಮಹಾ ಐಶ್ವರ್ಯವಂತ. ಗಣಿಗಳಲ್ಲೂ ವ್ಯಾಕ್ಟೊಲುಸ್ ನದಿಯಲ್ಲೂ ದೊರೆಯುತ್ತಿದ್ದ ಚಿನ್ನದ ಅದುರುಗಳಿಂದ ಯಥೇಚ್ಛವಾಗಿ ಧನ ಗಳಿಸಿದ್ದ. ಆ ಕಾಲದಲ್ಲಿ ಇವನಿಗಿಂತ ಹೆಚ್ಚಿನ ಐಶ್ವರ್ಯವಂತ ದೊರೆ ಮತ್ತಾರೂ ಇರಲಿಲ್ಲವೆಂಬುದೇ ಇವನ ಖ್ಯಾತಿಗೆ ಕಾರಣವಾಯಿತು. ಇವನ ಕಾಲದಲ್ಲಿದ್ದ ಈಜಿಪ್ಟಿನ ದೊರೆ ಅಮಾಸಿಸ್ ಮತ್ತು ಕ್ಯಾಲ್ಡೀಯದ ನಬೊಪೊಲಸ್ಸರ್ ಇವನನ್ನು ಗೌರವಿಸುತ್ತಿದ್ದರು. ಮಿಡಿಯದ ದೊರೆಯೂ ತನ್ನ ಭಾವನೂ ಆಗಿದ್ದ ಅಸ್ಟ್ಯಾಜಿಸನನ್ನು ಪರ್ಷಿಯದ ಚಕ್ರವರ್ತಿ ಸೈರಸ್ ಕೊಂದು ಹಾಕಿದ್ದರಿಂದ ಅವನ ಮೇಲೆ ಸೇಡು ತೀರಿಸಿಕೊಳ್ಳಲೆಳಸಿ ಹೂಡಿದ ಯುದ್ಧದಲ್ಲಿ ಈತ ಮರಣ ಹೊಂದಿದನೆಂದು ಕಾಣುತ್ತದೆ. ಆಗ ಇವನು ಸಾಯಲಿಲ್ಲವೆಂದೂ ಬಹುಶಃ ಅನಂತರದ ಕಾಲದಲ್ಲಿ ಸೈರನ್ ಮತ್ತು ಕ್ಯಾಂಬೆಸಿಸನ ಸಲಹೆಗಾರನಾಗಿದ್ದಂತೆಯೂ ಮತ್ತೆ ಕೆಲವು ಮಾಹಿತಿಗಳಿಂದ ತಿಳಿದುಬರುತ್ತದೆ. ಇವನು ಹದಿನಾಲ್ಕು ವರ್ಷ ರಾಜ್ಯವಾಳಿದ. ಕೊನೆಗೆ ಇವನ ರಾಜ್ಯ ಪರ್ಷಿಯನರ ಕೈ ಸೇರಿತು.
(ಕೆ.ಜೆ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ